ಕೆಜಿಎಫ್ , ವಿಕ್ರಾಂತ್ ರೋಣ, ಚಾರ್ಲಿ, ಕಾಂತಾರ… ಈ ಎಲ್ಲಾ ಸಿನಿಮಾಗಳಲ್ಲೂ ಒಂದು ಕಾಮನ್ ಆಗಿರೋ ಅಂಶ ಇದೆ.. ಏನು ಅಂತ ಯೋಚಿಸ್ತಿದೀರಾ?.. ಅದೇ ಪ್ಯಾನ್ ಇಂಡಿಯಾ
ಹೌದು, ಒಂದಾದ ನಂತರ ಒಂದು ನಮ್ಮ ಕನ್ನಡ ಸಿನಿಮಾಗಳು ಇಡೀ ದೇಶದ ಜನರ ಮನಸ್ಸುಗಳನ್ನು ಕದ್ದಿವೆ. ಆದರೆ ಈಗ ಇಲ್ಲಿ ಹೇಳುತ್ತಿರುವ ವಿಚಾರ ಆ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ನಮ್ಮ ಕನ್ನಡದ ನಟಿಯರ ಕುರಿತು..
ಶ್ರೀನಿಧಿ ಶೆಟ್ಟಿ: ನಟನ ತರಬೇತಿ ಇಲ್ಲದೆ ಐದು ಭಾಷೆಯ ಸಿನಿಮಾದ ಮೂಲಕ ನಟನಾಜೀವನ ಶುರು ಮಾಡಿದ ಅವರಿಗೆ ಚಿತ್ರದ ಸೆಟ್ಟೇ ನಿಜವಾದ ಪಾಠಶಾಲೆ ಆಯಿತು ಎಂದು ಅವರೇ ಹೇಳಿಕೊಂಡಿದ್ದಾರೆ. ‘ಮಿಸ್ ಸೂಪರ್ ನ್ಯಾಷನಲ್‘ ಕಿರೀಟ ತಲೆಯ ಮೇಲೆ ಮಿನುಗುತ್ತಿದ್ದ ಹಾಗೆಯೇ ಮಂಗಳೂರಿನ ಬೆಡಗಿ ಶ್ರೀನಿಧಿ ಶೆಟ್ಟಿಗೆ ಚಿನ್ನದ ಗಣಿಯಲ್ಲಿ ನಿಧಿ ಸಿಕ್ಕಿತು. ಸೌಂದರ್ಯ ಸ್ಪರ್ಧೆಗಳಲ್ಲಿ ಮಿಂಚುತ್ತಿದ್ದ ಅವರು ಈಗ ಪಂಚಭಾಷಾ ನಟಿ.
ನೀತಾ ಅಶೋಕ್ : ಕರಾವಳಿಯ ಚೆಲುವೆ ನೀತಾ ಅಶೋಕ್ ಕುಂದಾಪುರ ಬಳಿಯ ಕೋಟದಲ್ಲಿ ಹುಟ್ಟಿ ಬೆಳೆದವರು. ನೀತಾ ಅವರ ಬಣ್ಣದ ಲೋಕದ ಜರ್ನಿ ಶುರುವಾಗಿದ್ದು ಕಿರುತೆರೆ ಮೂಲಕ. ಎಂಬಿಎ ಓದುವಾಗಲೇ ಧಾರಾವಾಹಿಗಳಿಂದ ಆಫರ್ ಗಳು ಇವರಿಗೆ ಬಂದಿತ್ತಂತೆ.
ಇವರು ದೊಡ್ಡ ಪರದೆಗೆ ಕಾಲಿಟ್ಟಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ ವಿಕ್ರಾಂತ್ ರೋಣ ಸಿನಿಮಾ ಮೂಲಕ. ಅಪರ್ಣಾ ಬಲ್ಲಾಳ ಪನ್ನ ಎಂಬ ಪಾತ್ರದಲ್ಲಿ ನಿರೂಪ್ ಭಂಡಾರಿ ಅವರಿಗೆ ಜೊತೆಯಾಗಿ ನೀತಾ ನಟಿಸಿದ್ದರು, ಇದು ಅವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತು.
ಸಂಗೀತಾ ಶೃಂಗೇರಿ: ಇವರೂ ಸಹ ಮೊದಲು ಬಣ್ಣ ಹಚ್ಚಿದ್ದು ಹರಹರ ಮಹಾದೇವ ಧಾರವಾಹಿಗೆ ಅದಾದ ನಂತರ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದು 777 ಚಾರ್ಲಿ ಸಿನಿಮಾದ ಮೂಲಕವೇ. ಚಾರ್ಲಿ ಸಿನಿಮಾದಲ್ಲಿ ದೇವಿಕಾ ಎಂಬ ಹೆಸರಿನ ಆ್ಯನಿಮಲ್ ವೆಲ್‌ಫೇರ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಂಗೀತ ಅವರು ಈ ಪಾತ್ರಕ್ಕೆ ಐದು ವರ್ಷದ ಹಿಂದೆಯೇ ಆಡಿಷನ್ ಮೂಲಕ ಆಯ್ಕೆಯಾಗಿದ್ದರು. ಸುಮಾರು 2 ಸಾವಿರ ಜನರ ಆಡಿಷನ್ ನಲ್ಲಿ ಸಿನಿಮಾ ತಂಡ ಆಯ್ಕೆ ಮಾಡಿದ್ದು, ಸಂಗೀತ ಅವರನ್ನ.
‘ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದ್ದು ಮಿಸ್ ಇಂಡಿಯಾ ಗೆದ್ದಷ್ಟೇ ಖುಷಿಯಾಗಿತ್ತು’ ಎಂದು ಅವರು ಹೇಳಿದ್ದರು. ಮೈಸೂರಿನಿಂದ ಶುರುವಾಗಿ ಗುಜರಾತ್, ರಾಜಸ್ಥಾನದವರೆಗೂ ಇವರ ಕ್ಯಾರೆಕ್ಟರ್ ಟ್ರಾವೆಲ್ ಆಗುತ್ತದೆ. ದೆಹಲಿ ಮತ್ತು ಮುಂಬೈ ನಲ್ಲಿ ಈ ಸಿನಿಮಾಗೆ ಜನರಿಂದ ಉತ್ತಮ ಸ್ಪಂದನೆ ದೊರೆತಿತ್ತು. ಈಗ ಸಂಗೀತ ಅವರು ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.
ಸಪ್ತಮಿ ಗೌಡ: ಯಾವುದೇ ನಿರೀಕ್ಷೆಗಳಿಲ್ಲದೆ ತೆರೆಕಂಡು ನಮ್ಮವರಷ್ಟೇ ಅಲ್ಲದೆ ಕನ್ನಡೇತರರ ಮನಸ್ಸು ಗೆದ್ದಿರುವ ಸಿನಿಮಾ ಕಾಂತಾರದಲ್ಲಿ ಲೀಲಾ ಪಾತ್ರದಲ್ಲಿ ಮಿಂಚಿರುವ ಸಪ್ತಮಿ ಗೌಡ ಅವರಿಗೆ ಇದು ಮೊದಲ ಸಿನಿಮಾ ಅಲ್ಲ. ‘ಪಾಪ್‌ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಲಕ ಸಪ್ತಮಿ ಗೌಡ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಆದರೆ ಅವರನ್ನು ಪಾನ್ ಇಂಡಿಯಾ ಮಟಕ್ಕೆ ಪರಿಚಯಿಸಿದ್ದು ‘ಕಾಂತಾರ’. ಲೀಲಾ ಪಾತ್ರದ ಮೂಲಕ ಸಕತ್ ಮಿಂಚಿದ ಸಪ್ತಮಿ ಗೌಡ ಅವರಿಗೆ ಹೊರ ರಾಜ್ಯಗಳಲ್ಲಿ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ.